ಪೋಸ್ಟ್, ಎಮಿಲಿ ಪ್ರೈಸ್	
	1873-1960. ಅಮೆರಿಕೆಯ ಲೇಖಕಿ ಮತ್ತು ಪತ್ರಿಕಾ ಬರಹಗಾರ್ತಿ. ಹುಟ್ಟಿದ್ದು ಬಾಲ್ಟಿಮೋರ್‍ನಲ್ಲಿ. ತಂದೆ ಬ್ರೂಸ್ ಪ್ರೈಸ್. ಪ್ರಸಿದ್ಧ ಸೌಧಶಿಲ್ಪಕಲಾತಜ್ಞ. ಈಕೆ ತನ್ನ ಬಾಲ್ಯವನ್ನು ನ್ಯೂ ಯಾರ್ಕಿನಲ್ಲಿ ಕಳೆದು ಖಾಸಗಿಯಾಗಿಯೂ ಶಿಕ್ಷಣ ಪಡೆದಳು. ಎಡ್ವಿನ್ ಮೇನ್ ಪೋಸ್ಟ್ ಎಂಬಾತನೊಂದಿಗೆ 1892ರಲ್ಲಿ ಈಕೆಯ ಮದುವೆಯಾಯಿತು. ಕೆಲವೇ ವರ್ಷಗಳಲ್ಲಿ ವಿವಾಹ ವಿಚ್ಛೇದನ ಪಡೆದು ತನ್ನ ಇಬ್ಬರು ಪುತ್ರರನ್ನು ಸಾಕುವ ಹೊಣೆ ಹೊತ್ತಳು. ಪತ್ರಿಕೆಗಳಿಗೆ ಲೇಖನಗಳನ್ನು ಬರೆದು ಜೀವನ ಸಾಗಿಸತೊಡಗಿದಳು. ಹವ್ಯಾಸವಾಗಿದ್ದ ಬರವಣಿಗೆ ಈಗ ವೃತ್ತಿಯಾಯಿತು. ಈಕೆಯ ಮೊದಲ ಪುಸ್ತಕ ದಿ ಫೈಟ್ ಆಫ್ ಎ ಮಾತ್ 1904ರಲ್ಲಿ ಪ್ರಕಟವಾಯಿತು. ಅನಂತರ ಕಾದಂಬರಿ, ಸಣ್ಣ ಕತೆಗಳು ಹೊರಬಂದವು. ಐರೋಪ್ಯ ಜೀವನದ ಹಿನ್ನೆಲೆಯಲ್ಲಿ ಈ ಕತೆಗಳು ಮೂಡಿದವು. 1922ರಲ್ಲಿ ಈಕೆಯ ವಿಶಿಷ್ಟ ಕೃತಿ ಎನಿಸಿದ ಎಟಿಕೆಟ್ ಇನ್ ಸೊಸೈಟಿ, ಇನ್ ಬಿಸಿನೆಸ್, ಇನ್ ಪಾಲಿಟಿಕ್ಸ್ ಆಂಡ್ ಅಟ್ ಹೋಮ್ ಪ್ರಕಟವಾದ ಕೂಡಲೇ ಅದ್ಬುತ ಯಶಸ್ಸು ಪಡೆಯಿತು. ಅಂದಿನಿಂದ ಈಕೆ ಜೀವಿಸಿರುವ ತನಕವೂ ಈ ಪುಸ್ತಕ ಹತ್ತು ಆವೃತ್ತಿಗಳನ್ನೂ 90 ಮುದ್ರಣಗಳನ್ನೂ ಕಂಡಿತು. ಎಟಿಕೆಟ್ ಪುಸ್ತಕ ಸಾಮಾಜಿಕ ಶಿಷ್ಟಾಚಾರ, ವ್ಯಾಪಾರದಲ್ಲಿ ತೋರುವ ಸದ್ವರ್ತನೆ, ರಾಜಕೀಯ ಸಜ್ಜನಿಕೆ, ಮನೆಯಲ್ಲಿ ಸಾಮಾನ್ಯವಾಗಿ ತೋರಬೇಕಾದ ಸದ್ವರ್ತನೆ ಈ ಎಲ್ಲವನ್ನೂ ಪ್ರಸ್ತಾಪಿಸುವುದಲ್ಲದೆ ಒಂದು ನೀತಿ ಸಂಹಿತೆಯನ್ನೇ ಮುಂದಿಡುತ್ತದೆ. ಯಾವ ಯಾವ ಸನ್ನಿವೇಶದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುವುದರ ಬಗ್ಗೆ ಅಧಿಕಾರವಾಣಿಯಿಂದ ಹೇಳಬಲ್ಲ ಬುದ್ಧಿವಚಿತೆ, ತಜ್ಞೆ ಎಂದು ಜನ ಈಕೆಯನ್ನು ಒಪ್ಪಿಕೊಂಡಿತು. ಮಾರ್ಗದರ್ಶನವನ್ನು ಬೇಡಿ, ಸಲಹೆಗಳನ್ನು ಕೇಳಿ ಸಾವಿರಾರು ಜನ ಓದುಗರ ಪತ್ರ ಬರೆಯತೊಡಗಿದರು. ಅವರಿಗೆ ಉತ್ತರಗಳನ್ನು ಬರೆದು ಯುಕ್ತವಾದ ಮಾರ್ಗದರ್ಶನ ತೋರಲು ಪತ್ರಿಕೆಗಳಲ್ಲಿ ನಿಯತಕಾಲಿಕವಾಗಿ ಒಂದು ಅಂಕಣವನ್ನೇ ಮೀಸಲಿರಿಸಿದಳು. ಇದೇ ವಿಷಯವನ್ನು ಕುರಿತ ರೇಡಿಯೋ ಕಾರ್ಯಕ್ರಮಗಳೂ ಜರುಗಿದುವು. ಎಟಿಕೆಟ್ ಶಿಷ್ಟ ನಡೆವಳಿಕೆಯ ಒಂದು ಪ್ರಮಾಣ ಗ್ರಂಥವೆನಿಸಿತು. 

	ಪಾಕಕಲೆ ಮತ್ತು ಗೃಹಾಲಂಕಾರ ಈಕೆಯ ಇತರ ಆಸಕ್ತಿಗಳಾಗಿದ್ದವು. ದಿ ಪರ್ಸನಾಲಿಟಿ ಆಫ್ ಎ ಹೌಸ್ (1930) ಎಂಬುದು ಮನೆಯ ಅಂದ-ಚೆಂದದ ಬಗ್ಗೆ ಕುರಿತದ್ದು. ದಿ ಎಮಿಲಿ ಪೋಸ್ಟ್ ಕುಕ್ ಬುಕ್ (1951) ಎಂಬುದು ಅಡಿಗೆಯನ್ನು ಕುರಿತದ್ದು. ಹೌ ಟು ಬಿಹೇವ್ ದೊ ಎ ಡಿಬಟೆಂಟ್ (1928); ಚಿಲ್ಡ್ರನ್ ಆರ್ ಪೀಪಲ್ (1940)- ಇವು ಈಕೆಯ ಇನ್ನೆರಡು ಕೃತಿಗಳು.
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ